ಪುಸ್ತಕ ಪ್ರಪಂಚ -
ಕರ್ನಾಟಕ ರಾಜ್ಯ ವಯಸ್ಕರ ಶಿಕ್ಷಣ ಸಮಿತಿಯಿಂದ ಪ್ರಕಟವಾಗುವ ಮಾಸ ಪತ್ರಿಕೆ. 1946ರ ಆಗಸ್ಟ್‍ನಲ್ಲಿ ಆರಂಭವಾಯಿತು. ರೀಡರ್ಸ್ ಡೈಜೆಸ್ಟ್ ಮಾದರಿಯಲ್ಲಿ ಕನ್ನಡದಲ್ಲಿ ಪ್ರಕಟವಾಗುತ್ತಿದೆ. ವಯಸ್ಕರ ಶಿಕ್ಷಣದ ಕ್ಷೇತ್ರದಲ್ಲಿ ಅನುಭವಿಯಾದವರೊಬ್ಬರನ್ನು ಸಂಪಾದಕರನ್ನಾಗಿ ಸಮಿತಿ ನಿಯಮಿಸುತ್ತದೆ. ಇವರಿಗೆ ನೆರವು ಮತ್ತು ಮಾರ್ಗದರ್ಶನ ನೀಡಲು ಸಂಪಾದಕೀಯ ಮಂಡಳಿಯೊಂದಿದೆ. ಅನೇಕ ಹೆಸರಾದ ಕನ್ನಡ ಸಾಹಿತಿಗಳೂ, ಕವಿಗಳೂ, ವಿಮರ್ಶಕರೂ, ಅಧಿಕಾರಿಗಳೂ ಸಂಪಾದಕೀಯ ಮಂಡಲಿಯ ಸದಸ್ಯರು. ಈ ಮಂಡಳಿ ತಿಂಗಳಿಗೆ ಒಮ್ಮೆ ಸೇರಿ ಪ್ರಕಟಣೆಗೆ ಬಂದಿರುವ ಲೇಖನಗಳು, ವಿಮರ್ಶೆಗಳು ಮುಂತಾದವನ್ನು ಪರಿಶೀಲಿಸುತ್ತದೆ. 

ಪತ್ರಿಕೆಯ ಮೂಲ ಉದ್ದೇಶಗಳು ಇವು: 1. ಕನ್ನಡೇತರ ಭಾಷೆಗಳಲ್ಲಿ ಪ್ರಕಟವಾದ ಮುಖ್ಯ ಕನ್ನಡ ಲೇಖನಗಳ ಸಾರಾಂಶಗಳನ್ನು ಪ್ರಕಟಿಸಿ ಅವುಗಳ ಪರಿಚಯ ಮಾಡಿಕೊಡುವುದು. 2. ಆಯಾ ತಿಂಗಳಲ್ಲಿ ಪ್ರಕಟವಾದ ಮುಖ್ಯ ಕನ್ನಡ ಪುಸ್ತಕಗಳ ಮತ್ತು ಕನ್ನಡ ಲೇಖನಗಳ ಪರಿಚಯ ಮಾಡಿಕೊಡುವುದು. 3. ಕನ್ನಡದಲ್ಲಿ ಪ್ರಕಟವಾದ ಉತ್ತಮ ಪುಸ್ತಕಗಳ ಬಗ್ಗೆ ವಿಮರ್ಶಾತ್ಮಕ ಲೇಖನಗಳನ್ನು ಪ್ರಕಟಿಸುವುದು. 4. ಗ್ರಂಥಾಲಯ ವ್ಯವಸ್ಥೆಯ ವಿಚಾರವಾಗಿ ಲೇಖನಗಳನ್ನು ಪ್ರಕಟಿಸುವುದು. 5. ಒಬ್ಬ ಲೇಖಕರ ಎಲ್ಲ ಪುಸ್ತಕಗಳನ್ನೂ ಒಂದು ವಿಷಯದ ಮೇಲೆ ಬಂದಿರುವ ಅನೇಕ ಪುಸ್ತಕಗಳನ್ನು ವಿಮರ್ಶಾತ್ಮಕವಾಗಿ ಅವಲೋಕಿಸುವುದು. 6. ಗ್ರಾಮ ಜೀವನಕ್ಕೆ ಸಂಬಂಧಿಸಿದ ಕಥೆ, ಕವಿತೆ, ಪ್ರಬಂಧ ಮತ್ತು ವ್ಯಕ್ತಿ ಚಿತ್ರಗಳನ್ನು ಪ್ರಕಟಿಸುವುದು. 7. ಕಲಾಕೃತಿಗಳನ್ನು ಅಚ್ಚು ಮಾಡುವುದು. 8. ಕನ್ನಡದಲ್ಲಿ ಪ್ರಕಟವಾದ ಮುಖ್ಯ ಲೇಖನಗಳ ಸಾರಾಂಶವನ್ನು ಪ್ರಕಟಿಸುವುದು. 9. ಗ್ರಾಮಸ್ಥರಿಗೆ ರುಚಿಸುವ ವಿಷಯಗಳ ಮೇಲೆ ಸುಲಭ ಶೈಲಿಯಲ್ಲಿ ಲೇಖನಗಳನ್ನು ಪ್ರಕಟಿಸುವುದು.ಕೆಲವು ವರ್ಷಗಳಿಂದ ಈ ನಿಯಕಾಲಿಕದ ಪ್ರಕಟಣೆ ಸ್ಥಗಿತವಾಗಿದೆ. 
(ಎಸ್.ಆರ್.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ